ಆಂಜಿಯೋಪ್ಲಾಸ್ಟಿ

ಕಿರೀಟಕಧಮನಿಯ ರೋಗದಿಂದ ಹೃದಯಸ್ನಾಯುವಿಗೆ ಉಂಟಾಗುವ ರಕ್ತಪೂರೈಕೆಗೆ ಭಂಗವಾದುದನ್ನು ಹೋಗಲಾಡಿಸಲು ಹೃದಯಕ್ಕೆ ಹೊಸ ರಕ್ತನಾಳಗಳ ಜೋಡಣೆಯ ಬೈಪಾಸ್ ಸರ್ಜರಿಯ ಬದಲು, ಇಂದು ಬಳಕೆಗೆ ಬಂದಿರುವ ನಾವಿನ್ಯಪೂರ್ಣ ಉಪಕರಣಗಳು ಮತ್ತು ತಾಂತ್ರಿಕ ಮುನ್ನಡೆಯಿಂದ ಹೊಸ ಚಿಕಿತ್ಸಾ ವಿಧಾನಗಳು ರೂಪುಗೊಂಡಿದ್ದು, ಅವು ಹೃದಯದ ರಕ್ತಪೂರೈಕೆಯನ್ನು ಸರಾಗಗೊಳಿಸುವಲ್ಲಿ ಸಮರ್ಥವಾಗಿವೆ.

	ನೆಣದ ಅಂಶಗಳು ಪೆಡಸುಗೊಂಡ ಕಿರೀಟಕಧಮನಿಯ ಒಳ ಭಿತ್ತಿಯಲ್ಲಿ ಒಗ್ಗೂಡಿಬಿದ್ದು ರಕ್ತಪ್ರವಾಹದ ದಾರಿಗೆ ಅಡ್ಡಿಯನ್ನುಂಟು ಮಾಡಿ ಹೃದಯಸ್ನಾಯುವಿಗೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುವುದರ ಫಲ ಹೃದಯ ವೇದನೆ ಮತ್ತು ಹೃದಯಾಘಾತ. ಕಿರೀಟಧಮನಿಯ ರೋಗಕ್ಕೆ ಕಾರಣವಾದ ಕಿರಿದಾದ ಇಲ್ಲವೆ ಮುರುಟಿ ಹೋದ ಧಮನಿಯ ಬದಲು ಬೇರೆ ರಕ್ತನಾಳಗಳನ್ನು ಜೋಡಿಸಿ ರಕ್ತ ಪ್ರವಾಹಕ್ಕೆ ಬದಲಿ ಮಾರ್ಗ ಕಲ್ಪಿಸುವ (ಬೈಪಾಸ್) ಶಸ್ತ್ರಕ್ರಿಯೆ ಬದಲು ರಕ್ತನಾಳಗಳಲ್ಲಿ ಉಂಟಾದ ಅಡ್ಡಿಯನ್ನೂ ಹೋಗಲಾಡಿಸುವ ಹೊಸವಿಧಾನಗಳಲ್ಲಿ ಮುಖ್ಯವಾದುದು ಚರ್ಮದ ಮೂಲಕ ಕಿರೀಟ ಧಮನಿಯ ಒಳಮಾರ್ಗದ ರಿಪೇರಿ (ಪರ್‍ಕ್ಸುಟೇನಿಯಸ್ ಟ್ರಾಸ್‍ಲೂಮಿನಲ್ ಕರೊನರಿ ಆಂಜಿಯೋಪ್ಲಾಸ್ಟಿ)

	ಪಿಟಿಸಿಎ ಎಂಬ ಸಂಕ್ಷಿಪ್ತ ಶಬ್ದ ಎಂದು ಕರೆಯುವ ಈ ರಕ್ತನಾಳ ಸುರೂಪಿಕ ಚಿಕಿತ್ಸೆ (ಆಂಜಿಯೋಪ್ಲಾಸ್ಟಿ) ಯನ್ನು 1922ರಲ್ಲಿ ಸೈಸ್ ವೈದ್ಯ ಆಂದ್ರೀ ಗ್ರಂಸಿóಗ್ ಮೊದಲಬಾರಿ ಜುಂಕ್‍ನಲ್ಲಿ ಬಳಕೆಗೆ ತಂದ. ನಂತರದ ವರುಷಗಳಲ್ಲಿ ಆ ವಿಧಾನ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದು, ಅದನ್ನೀಗ ಪರಿಣಾಮಕಾರಿಯಾಗಿ ವ್ಯಾಪಕವಾಗಿ ಬಳಸಲಾಗುತ್ತಿದೆ. 

	ಈ ವಿಧಾನದ ಮೊದಲ ಹೆಜ್ಜೆಯಲ್ಲಿ ಮಾರ್ಗದರ್ಶಿ (ಲೀಡ್) ತೂರ್ನಳಿಗೆ (ಕ್ಯಾಸಿಟರ್) ಎಂದು ಕರೆಸಿಕೊಳ್ಳುವ ಪ್ಲಾಸ್ಟಿಕ್ ಕೊಳವೆಯನ್ನು ತೊಡೆ ಇಲ್ಲವೆ ತೋಳುಧಮನಿಯ ಮೂಲಕ ಒಳಸೇರಿಸಿ ರೋಗಿಷ್ಟ ಕಿರೀಟಕಧಮನಿಯತ್ರ ತಳ್ಳಲಾಗುವುದು. ವಿಕಿರಣಕ್ಕೆ ಮಸುಕಾದ ದ್ರವದ ಬಳಕೆಯಿಂದ ಕೀರೀಟಕ ಧಮನಿಯಲ್ಲಿ ಅಡ್ಡಿಯಿರುವುದೆಲ್ಲಿ ಎಂಬುದನ್ನು ಕಾಣಲಾಗುವುದು. ಅನಂತರ 0.014 ಇಂಚು ವ್ಯಾಸದ ಲೋಹದ ತೆಳುತಂತಿಯನ್ನೂ ರಕ್ತನಾಳದಲ್ಲಿರುವ ಅಡ್ಡಿಯನ್ನೂ ದಾಟಿಹೋಗುವಂತೆ ಧಮನಿಯೊಳಕ್ಕೆ ಸೇರಿಸಲಾಗುವುದು. ಈ ತಂತಿಯ ಮೇಲೆ ಉಬ್ಬಿಸಬಹುದಾದ ಬಲೂನು ಇರುತ್ತದೆ. ಅಡ್ಡಿಯಿರುವ  ಪ್ರದೇಶವನ್ನೂ ಒತ್ತುವಂತೆ ಬಲೂನನ್ನು ಒಳಕ್ಕೆ ಇರಿಸಲಾಗುವುದು. ಅನಂತರ ದ್ರವ ಮಾಧ್ಯಮದಿಂದ 20 ಸೆಕೆಂಡ್ ಹಿಡಿದು ಕೆಲವು ನಿಮಿಷಗಳವರೆಗೆ ಅದು ಉಬ್ಬಿರುವಂತೆ ಮಾಡಲಾಗುವುದು, ಸಂಪೂರ್ಣವಾಗಿ ಹೀಚಿದ ಬಲೂನು ನೆಣದ ಅಂಶಗಳಿರುವ ಧಮನಿ ಭಿತ್ತಿಯ ಮೇಲೆ ಅವುಗಳನ್ನು ಅಪ್ಪಚ್ಚಿ ಮಾಡುತ್ತದೆ. ಪರಿಣಾಮ ಧಮನಿ ಸುತ್ತಳತೆ ಹೆಚ್ಚಿ ಪುನರಪಿ ಅದರ ಮೂಲಕ ರಕ್ತ ಪ್ರವಾಹ ಸರಾಗವಾಗಿ ಜರುಗುವುದು.

	ಈ ವಿಧಾನವನ್ನು ಬಳಕೆಗೆ ತಂದ ಪ್ರಾರಂಭದಲ್ಲಿ ಅದನ್ನು ದೀರ್ಘಾವಧಿ ಕಾಲ ಕಿರೀಟಕಧಮನಿ ರೋಗದಿಂದ ಬಳಲುವ ವ್ಯಕ್ತಿಗಳಲ್ಲಿ ಉಪಯೋಗಿಸಲಾಗುತ್ತಿದ್ದಿತು. ಒಂದೆರಡು ಧಮನಿಗಳ ನಿರ್ದಿಷ್ಟ ತಾಣಗಳಲ್ಲಿ ಉಂಟಾದ ಅಡ್ಡಿಯನ್ನು ಶೇಕಡಾ 90ರಷ್ಟು ವ್ಯಕ್ತಿಗಳಲ್ಲಿ ಯಶಸ್ವಿಯಾಗಿ ದೂರಮಾಡಲಾಗುತ್ತಿದ್ದಿತು. ಈಚೆಗೆ ಈ ವಿಧಾನವನ್ನು ತೀವ್ರತರ ಹೃದಯಾಘಾತ ಹೊಂದಿದ ರೋಗಗಳಲ್ಲಿ ಕಾಲಾವಕಾಶಕ್ಕೆಡೆ ಮಾಡದೆ ಬಳಸಲಾಗುತ್ತಿದೆ. ಪೆಡಸುಗೊಂಡ ಕಿರೀಟಕಧಮನಿಯನ್ನೂ ರಕ್ತಕರಣೆ ಸಂಪೂರ್ಣವಾಗಿ ಮುಚ್ಚಿ ರಕ್ತ ಹರಿದು ಹೋಗದಂತಾಗಿರುವ ವ್ಯಕ್ತಿಗಳಲ್ಲಿ ಈ ವಿಧಾನದಿಂದ ಅಡ್ಡಿಯನ್ನೂ ತೆಗೆದುಹಾಕಬಹುದು. ಅದರಿಂದ ಹೃದಯ ಸ್ನಾಯು ಘಾತಗೊಳ್ಳದೆ ಚೇತರಿಸಿಕೊಳ್ಳಲು ಅವಕಾಶ ದೊರೆಯುವುದು. 

	ಪಿಟಿಸಿಎ ಜೊತೆ ರಕ್ತಕರಣೆಯನ್ನೂ ಕರಗಿಸುವ ಔಷಧಗಳನ್ನೂ ನೀಡುವುದರಿಂದ ಕರಣೆ ಕರಗಿಧಮನಿಯ ಮಾರ್ಗ ಸಂಪೂರ್ಣವಾಗಿ ತೆರೆಯಲ್ಪಡುವುದು. ಇಂತಹ ಚಿಕಿತ್ಸೆ ಪರಿಣಾಮಕಾರಿಯಾಗಲು ಅದನ್ನು ಹೃದಯಾಘಾತವಾದ ನಾಲ್ಕಾರು ಘಂಟೆಗಳಲ್ಲಿ ನೀಡಬೇಕು. ಬಲೂನನ್ನು ಕಿರಿದುಗೊಂಡ ಹೃತ್ಕವಾಟ ಮತ್ತು ಕಿರಿದಾದ ಹೃದ್ದಮನಿ (ಅಯೋರ್ಟ) ಯನ್ನೂ ಅಗಲ ಗೊಳಿಸಲು ಬಳಸಲಾಗುತ್ತದೆ. 

	ಪಿಟಿಸಿಎ ವಿಧಾನದ ಪರಿಣಾಮದ ಮೇಲೆ ಎರಡು ಅಂಶಗಳು ಪ್ರಭಾವ ಹೊಂದಿವೆ: ಈ ವಿಧಾನವನ್ನು ಬಳಸಿ ಅಗಲಗೊಳಸಿದ ಧಮನಿ ಏಕಾಏಕಿ ಸಂಪೂರ್ಣವಾಗಿ ಮುಚ್ಚಿ ಹೋದರೆ ಬೈಪಾಸ್ ಸರ್ಜರಿ ಕೈಕೊಂಡು ರಕ್ತಪ್ರವಾಹಕ್ಕೆ ಹೊಸ ಮಾರ್ಗವನ್ನು ಕಲ್ಪಿಸಬೇಕಾಗುವುದು. ಆರು ತಿಂಗಳಲ್ಲಿ ಪುನರಪಿ ಅಡ್ಡಿ ಕಾಣಿಸಿದರೆ ಈ ವಿಧಾನವನ್ನು ಮತ್ತೆ ಕೈಕೊಂಡು ತಲೆದೋರದ ಅಡ್ಡಿಯನ್ನು ದೂರ ಮಾಡಬೇಕಾಗುವುದು. ಅದರ ಬದಲುತಂತಿ ಬಲೆ (ಸ್ಟೆಂಟ್) ಯನ್ನೂ ಅಗಲಗೊಂಡ ಕಿರೀಟಧಮನಿಗೆ ಒಳಗಿನಿಂದ ಆಧಾರವಾಗಿ ನೀಡಿ ರಕ್ತನಾಳ ಏಕಾಏಕಿ ಮುಚ್ಚಿ ಹೋಗದಂತೆ ಮತ್ತು ಪುನರಪಿ ಅಡ್ಡಿ ತಲೆದೋರದಂತೆ ಮಾಡಬಹುದು. 

(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ